Monday, June 4, 2018

ಡೈನೋಸರ್ ಲೋಕದಲ್ಲಿ ಅದ್ದು ! - 1 / Addu in Dinosaur Land! - 1

ಡೈನೋಸರ್ ಲೋಕದಲ್ಲಿ ಅದ್ದು!
ಅಧ್ಯಾಯ 1



ಅದ್ವಿಕಾ ರಾಯಲ್ ಈಸ್ಟರ್ ಷೋ ನೋಡಿಕೊಂಡು ಅಪ್ಪ ಅಮ್ಮನೊಂದಿಗೆ ಆಗತಾನೆ ಮನೆಗೆ ಹಿಂದಿರುಗಿದ್ದಳು. ಷೋದಲ್ಲಿ ಕೊಂಡುಕೊಂಡ ಆಟಿಕೆಗಳು ತುಂಬಿದ ಷೋ ಬ್ಯಾಗನ್ನು ತಿರುಗಿಸಿ ಮುರುಗಿಸಿ ನೋಡುತ್ತ ಕುಳಿತಿದ್ದಳು. 
" ಅದ್ದು! ಮೊದ್ಲು ಊಟ ಮಾಡು ಬಾ! ಷೋ ಬ್ಯಾಗೆಲ್ಲ ಆಮೇಲೆ ನೋಡುವಿಯಂತೆ!"
'' ಬೇಡಮ್ಮ! ನನ್ನ ಹೊಟ್ಟೆ ಫುಲ್!''  ಷೋ ಬ್ಯಾಗಿನ ಮೇಲೆ ಫಳ ಫಳ ಹೊಳೆದ ಡೈನೋಸರ್ ಚಿತ್ರವನ್ನು ಸಂತೋಷದಿಂದ ಸವರುತ್ತ ಅಮ್ಮನಿಗೆ ಉತ್ತರಿಸಿದಳು ಅದ್ದು.
'' ಈಸ್ಟರ್ ಷೋದಲ್ಲಿ ಪಿಜ್ಜಾ, ಪಾಪ್ ಕಾರ್ನ, ಚಿಪ್ಸ್, ಐಸ್ ಕ್ರೀಮ್ ಎಲ್ಲ ತಿಂದು ಅವ್ಳಿಗೆ ಡುಮ್ಮ ಹೊಟ್ಟೆಯಾಗ್ಬಿಟ್ಟಿದೆ! ಸುಮ್ನೆ  ಏಕೆ ಒತ್ತಾಯ ಮಾಡ್ತೀಯ! ಊಟ ಬೇಡ್ದಿದ್ರೆ ಬಿಡು!" ಎಂದರು ಅಪ್ಪ.
" ಯಾರಿಗೂ ಊಟ ಬೇಕಾಗಲ್ಲಅಂತ ಗೊತ್ತು. ಅದಕ್ಕೇ  ಬರಿ ಸೂಪ್ ಮತ್ತು ಸಲಾಡ್ ಮಾಡಿದ್ದೀನಿ. ಸೊಲ್ಪ ಲಘು ಆಹಾರ ತಿಂದ್ರೆ ''ಡುಮ್ಮ'' ಎಲ್ಲ ಕರಗಿ ಹೋಗತ್ತೆ! ಹೊಟ್ಟೆ ಹ್ಯಾಪಿಯಾಗಿರತ್ತೆ!" ಎಂದ ಅಮ್ಮ "ಅದ್ದೂ! ಬಾ !" ಎಂದು ಮತ್ತೆ ಕರೆದಳು.
 ಊಟದ ಮೇಜಿನ ಮುಂದೆ ಬಂದು ಕುಳಿತಳು ಅದ್ದು. 
" ಓ! ಅಮ್ಮ! ಸಲಾಡಾ?" ಎಂದು ಮುಖ ಸೊಟ್ಟಗೆ ಮಾಡಿದಳು.
" ತರಕಾರಿ  ಆರೋಗ್ಯಕ್ಕೆ ಒಳ್ಳೇದು ಅಂತ ಸ್ಕೂಲಲ್ಲಿ ಪ್ರಬಂಧ ಬರೀತಿಯ! ತಿನ್ನಕ್ಕೆ ಅದ್ಯಾಕೆ ತಕರಾರು ಮಾಡ್ತೀಯೋ? ಸರಿ ಸರಿ! ಸೂಪಾದ್ರೂ  ಕುಡಿ!" ಎಂದ ಅಮ್ಮ ಸೂಪ್ ತಂದಿಟ್ಟಳು. 
ಸೂಪನ್ನು ಬಾಯಿಗಿಟ್ಟಂತೆಯೇ  'ಕಳಕ್' ಎಂದು ನಕ್ಕಳು ಅದ್ದು. ಹೀರುತ್ತಿದ್ದ ಸೂಪ್ ನೆತ್ತಿಗೇರಿ ಕೆಮ್ಮತೊಡಗಿದಳು.
" ನಿಧಾನ! ನಿಧಾನ! ತಿನ್ನೋವಾಗ ಯಾಕೆ ನಗ್ತೀಯಾ? " ಅಮ್ಮ ಅವಳ ತಲೆ ತಟ್ಟಿ ನೀರು ಕುಡಿಸಿದಳು.
" ಅದ್ದು! ಅಷ್ಟು ನಗುವಂತ ಜೋಕ್ ಏನು? "  ಅಪ್ಪನಿಗೆ  ಕುತೂಹಲ.
" ಡೈನೋಸರ್ ಅಡ್ವೆಂಚರ್ ಗೂಡಾರಕ್ಕೆ ಹೋಗಿದ್ದು ನೆನಪಾಯಿತು!" ಎನ್ನುತ್ತ ಕಿಲ ಕಿಲ ನಕ್ಕಳು ಅದ್ದು. ಅರೆಗತ್ತಲಲ್ಲಿ  ಕೆಂಪು ಬೆಳಕಲ್ಲಿ ಗೂಡಾರದ ತುಂಬ ಬಗೆಬಗೆಯ ಡೈನೋಸರ್ಗಳು! ಗುರುಗುಟ್ಟಿ ಅವು ಕೈಕಾಲುಗಳನ್ನು ಚಲಿಸಿದಾಗ ಎಷ್ಟು ಭಯಂಕರವಾಗಿ ಕಂಡವು! ಅಮ್ಮ ಒಂದು ಡೈನೋಸರನ್ನು ಕಂಡು ಹಿಮ್ಮೆಟ್ಟಿದಳು. ಹಿಂದೆಯೇ ಇದ್ದ ಮತ್ತೊಂದು ಡೈನೋಸರ್ ಧೀರ್ಘವಾಗಿ ಫೀಳಿಟ್ಟಿತು.   'ಹಕ್!' ಎಂದು  ಬೆಚ್ಚಿ ಬೆದರಿ ಎಗರಿ ದೂರ ಜಿಗಿದ ಅಮ್ಮನನ್ನು ನೆನೆದು ಅದ್ದುವಿಗೆ  ತಡೆಯಲಾರದಷ್ಟು  ನಗು ಉಕ್ಕಿತು.
" ಅಮ್ಮ! ಅಮ್ಮ ....! ಡೈನೋಸರ್ ನೋಡಿ ಹೇಗೆ ಜಂಪ್ ಮಾಡಿದ್ಲು! ತುಂಬಾ ಫನ್ನಿ! ಹ.... ಹ... ಹಾ! " ಮಾತು ಮುಗಿಸದೆ ಮತ್ತೆ ನಕ್ಕಳು ಅದ್ದು.
" ಕತ್ತೆ! ನನ್ನ ಭಯ ನಿನಗೆ ಜೋಕ್ ಆಯಿತೇನೇ?" ಅಮ್ಮ ಹುಸಿಗೋಪ ತೋರಿದಳು.
" ಅಮ್ಮನ ಭಯ ಹಾಗಿರ್ಲಿ! ನಿನಗೆ ಡೈನೋಸರ್ ನೋಡಿ ಭಯವಾಗಲಿಲ್ವೆ?" ಎಂದು ಕೇಳಿದರು ಅಪ್ಪ.
" ಇಲ್ಲ ಅಪ್ಪ! ಡೈನೋಸರ್ ನನಗೆ ತುಂಬಾ ಇಷ್ಟ."
" ಅದಕ್ಕೆತಾನೇ ಡೈನೋಸರ್ ಚಿತ್ರ ಇರೋ ಷೋ ಬ್ಯಾಗ್ ಕೊಂಡಿದ್ದು! ಅದರೊಳಗೆ ಡೈನೋಸರ್  ಸಂಬಂಧಿಸಿದ ಆಟಿಕೆಗಳೇ ಇರಬೇಕು." ಎಂದಳು ಅಮ್ಮ.
ಸೂಪ್ ಮುಗಿಸಿ ತನ್ನ ಕೋಣೆ ಸೇರಿದಳು ಅದ್ದು. ಅಂಗಡಿಯಲ್ಲಿದ್ದ  ನೂರಾರು ಷೋ  ಬ್ಯಾಗುಗಳ ನಡುವೆ ಹುಡುಕಿ ತನಗೆ ಪ್ರಿಯವಾದ ಡೈನೋಸರ್ ಚಿತ್ರದಿಂದ ಕೂಡಿದ 'ಫಳ ಫಳ' ಹೊಳೆದ ಬ್ಯಾಗನ್ನೇ ಆರಿಸಿಕೊಂಡಿದ್ದಳು ಅದ್ದು. 
ಅದರಲ್ಲಿ ಏನಿರಬಹುದು?
ಕೆಲಸಗಳನ್ನು ಮುಗಿಸಿಕೊಂಡು 'ಗುಡ್ ನೈಟ್' ಹೇಳಲು ಅದ್ದುವಿನ ಕೋಣೆಯೊಳಗೆ ಅಮ್ಮ ಹೋಗುವ ವೇಳೆಗೆ ಷೋ ಬ್ಯಾಗನ್ನು ಎದೆಗವಚಿಕೊಂಡು ನಿದ್ರಿಸಿಬಿಟ್ಟಿದ್ದಳು ಅದ್ದು.
' ಪಾಪ! ಇಡೀ ಈಸ್ಟರ್ ಷೋ ಮೈದಾನವನ್ನು ಸುತ್ತಾಡಿಬಂದಿದೆ ಮಗು. ಸುಸ್ತಾಗಿರಬೇಕು! ' ಎಂದುಕೊಂಡು ಅಮ್ಮ ಹೊರಗೆ ನಡೆದಳು.
ಸುತ್ತಾಡಿ ಸುಸ್ತಾಗಿದ್ದ ಅಪ್ಪ ಅಮ್ಮ ಅದ್ದುವಿನಂತೆಯೇ ಬೇಗ ನಿದ್ದೆ ಹೋದರು. ಹಾಲಲ್ಲಿದ್ದ ಕುಕ್ಕೂ ಗಡಿಯಾರ ಹನ್ನೆರಡು ಬಾರಿ 'ಕುಕ್ಕೂ ಕುಕ್ಕೂ' ಎಂದಿತು. 
ಅದ್ದುವಿನ ಕೋಣೆಯ ಕಿಟಕಿಯತ್ತ 'ಕಟ ಕಟ' ಶಬ್ದವಾಯಿತು !
                                                                          ಸಶೇಷ.... 
-----------------------------------------------------------------------------------------------


 ADDU IN DINOSAUR LAND
 Chapter 1



They had just returned from the Royal Easter Show.
Advika sat admiring her Show Bag, filled with the toys she had bought at the Show.
“ Addu ! Come to the table” Called Amma, “Dinner Time !”
“ I don’t want dinner, Amma !  groaned Addu. “ Tummy Full !”
“ Don’t force her” said Appa, “she cannot be hungry after all the chips, popcorn, pizza and icecreams she had at The Show ! ”
“ I know,  none of us can be hungry. So, we are just having soup and a salad.  Said Amma,   “Come on, Addu! Just a cup of soup. To set your tummy right .”
Addu put away her bag and came to the table.
As soon as she had sipped some soup, she broke into a giggle, and immediately choked on the soup.
“ Careful dear !  said Amma, rubbing down her back “ Don’t laugh with your mouth full. ”
“ Whats so funny, Addu Dear ?  asked Appa.
“ I just remembered the Dinosaur Tent at the show ! ” said Addu giggling again, “ how Amma had jumped in terror ! ”
The Dinosaur Tent had been a scary place.  Dark and  lit with red lights, it was filled with Dinosaurs of all kinds. Amma had been startled by a huge one and moved back, only to have another one right behind her shrieking suddenly. Amma had jumped out of her skin and run out in terror!
“ Oh, so you find my fear of big lizards funny? Bad child ! ” scolded Amma in mock anger.
“ What about you? ”Asked Appa, “ Were you not scared? ”
“ Not at all! ”declared Addu proudly “ I love Dinosaurs ! ”
 Right after dinner, Addu skipped to her room, taking  the shiny Show Bag  with her. Of the hundreds of pretty bags found at the show, she had chosen this one : with Dinosaur designs on it ! And it was filled with Dinosaur themed toys!
By the time Amma came to tuck her in, Addu was fast asleep, clutching her precious Dino Bag to her chest.
It had been  a long and enjoyable day at the Easter Show. All three of them were tired and fell into deep sleep very soon.
When the Cuckoo clock in the hall chimed twelve times, there was a tapping sound on the window of Addu’s room !
                                                             To be continued.....

No comments:

Post a Comment